Friday, July 5, 2013

ಸುಳ್ಳೆ ನಗತಾಳ



ಸುಳ್ಳೆ  ನಗತಾಳ ತಮ್ಮ ಸಣ್ಣ ಹುಡುಗಿ 
ಹೊಳ್ಳೊಳ್ಳಿ  ನೋಡುತಾಳ ದೊಡ್ಡ ಹುಡುಗಿ



ತುಂಬಿದ ಕೊಡ ಚೆಲ್ಲಿ ಬರುತಾಳ ನೀರಿಗೆ
 ಸಣ್ಣಾಕಿ ಅಂತಾಳ ಬಾ ಹೊರೆಸು ತಲಿಗೆ 
ಅತ್ತಿತ್ತ ಹೊರಳುತ್ತ ಚಿತ್ತ  ನನ್ನತ್ತ ಬಿತ್ತ 
ದೊಡ್ದಾಕಿ ನಕ್ಕಾಗ ಹೊತ್ತು  ಮುಳಗಿತ್ತ 

ಅಂಟಿಸಿ ಸಣ್ಣಾಕಿ ಗೋಡೆಗೆ ಹರಳ 
ನಾಚುತ್ತ ಬಾಚ್ಯಾಳ ಕೂದಲ ಇರುಳ 
ಅಂಗಳ ರಂಗೋಲಿ ಸವದಿಲ್ಲ ಹಗಲ 
ದೊಡ್ದಾಕಿ ಬಿಡಿಸ್ಯಾಳ ಚುಕ್ಕಿಯ ಮುಗಿಲ 

ಗೆಳತ್ಯಾರ ಕೂಡಿಕೊಂಡು ಬರತಾಳ ಗುಡಿಗೆ 
ಸಣ್ಣಾಕಿ ಮನಸೆಲ್ಲ ಮತ್ತ್ಯಾರೋ ಕಡಿಗೆ 
ಕಟ್ಟಿದ ದನ ಬಿಚ್ಚಿ ಬಿಟ್ಟಾಳ ಹೊಳಿಗೆ 
ದೊಡ್ದಾಕಿ ಬಂದಾಳ ಹುಡುಕೂತ ಮಳಿಗೆ 

ಹೋದಲ್ಲಿ ಬಂದಲ್ಲಿ ಕದ್ದು ನೋಡ್ಯಾರ 
ಮಂದಿ ಮಕ್ಕಳ ಎತ್ತು ಮುದ್ದು ಮಾಡ್ಯಾರ 
ಸುಳ್ಳೇ ನಗತಾರ ಗೆಳೆಯ ಅಕ್ಕ ತಂಗ್ಯಾರು 
ಒಳ್ಳು-ಒಣಕಿಗೆ ಸಿಕ್ಕಿನಂತ ಮಂದಿ ಅಂತಾರು 

Sunday, November 20, 2011

ಮಹೂವಾ… ಮಹೂವಾ







ಮಹೂವಾ ಮಹೂವಾ
ಮಾಯದ ಮಹೂವಾ
ಮಹೂವಾ ಮಹೂವಾ
ಮಾಯವಾದೆ ಯಾಕವ್ವ

ಮುಗಿಲಾಗ ಹೂವಿನ ಬುಟ್ಟಿ
ನೆಲದಾಗ ಬಣ್ಣದ ಚಿಟ್ಟಿ
ಹಸಿದರೆ ಹೊಟ್ಟೆಗೆ ರೊಟ್ಟಿ
ದಾರಿಗೆ ನೆರಳನು ಕೊಟ್ಟಿ IIಮಹೂವಾ ಮಹೂವಾII

ಮೊಹ ಮಹುಲ ಇಲುಪ ಹಿಪ್ಪೆ
ಬಳಸದಿದ್ರೆ ಬಾಯಿ ಸಪ್ಪೆ
ಗುಡಿಸಲ ಜೇನು ತುಪ್ಪೆ
ಕರುವಿಗೆ ಹುಡಿ ಸೊಪ್ಪೆ IIಮಹೂವಾ ಮಹೂವಾII

ಗೊಂಡಮ್ಮ ಗಂಡನಿಗೆ
ಹುಳಿ ಹೆಂಡಮ್ಮ ನೀನು
ಕೊಯ ಕಂದಮ್ಮಗಳಿಗೆ
ಕೊಬ್ಬರಿಗೆ ಬೆಲ್ಲ ನೀನು IIಮಹೂವಾ ಮಹೂವಾII

ಸಂತಾಲ ಸುಂದರಿ ಜಡೆಗೆ
ಸಂತೆ ಹೂವಿನ ದಂಡೆ
ಸೋಲಿಗ ಸಿದ್ದಿಗಳಿಗೆ
ಸಾಬೂನು ಕೈ ಉಂಡೆ IIಮಹೂವಾ ಮಹೂವಾII

ಗಿಳಿ ಗುಬ್ಬಚ್ಚಿ ನಿನ್ನ
ಹಳೆ ಬಂಧುಗಳೇನೆ
ಬೆಳವ ಗೊರವಂಕ ನಿನ್ನ
ಮನೆ ಹಿರಿ ಮಕ್ಕಳೇನೆ IIಮಹೂವಾ ಮಹೂವಾII


ಇಂತಿಪ್ಪ ನಿನ್ನ ಬುಡಕೆ
ಕಾಯ್ದೆ ಕಾನೂನು ಯಾಕೆ
ಬೇರಿಗೆ ಹಗ್ಗವ ಕಟ್ಟಿ
ನೆಟ್ಟೋರ ಅಲ್ಲಿಂದ ಅಟ್ಟಿ IIಮಹೂವಾ ಮಹೂವಾII

ನವಿಲೇ ನೀ ನ್ಯಾಯ ಕೇಳೆ
ಇರುವೆ ನೀನೆಲ್ಲಿರುವೆ
ಕಾಗಕ್ಕ ಕಾರಣ ಕೇಳೆ
ಗೂಬೆ ನೀ ಮಾತಾಡೆ IIಮಹೂವಾ ಮಹೂವಾII


________________________________________________________________

ಟಿಪ್ಪಣಿ:
ನಮ್ಮ ದೇಶದ ಮಧ್ಯೆಪ್ರದೇಶ ಸೇರಿದಂತೆ ಮಹಾರಾಷ್ಟ್ರ,ಒರಿಸ್ಸಾ, ಚತ್ತೀಸ್ಗಡ, ಜಾರ್ಖಂಡ್ ಕಾಡಿನಲ್ಲಿ ಬೆಳೆವ ಈ ಹೂವು ಸಪೋಟಾಸಿಯೆ ಎಂಬ ಜಾತಿಗೆ ಸೇರಿದ್ದು, ವರ್ಷಕ್ಕೆ ೨೦ ರಿಂದ ೨೦೦ ಕೇಜಿ ಬೀಜ ಬಿಡುತ್ತದೆ. ಗಿರಿಜನ/ ಆದಿವಾಸಿಗಳ ಆಹಾರ ಪದಾರ್ಥವಾಗಿದ್ದು ಒಣಗಿದ ಹೂವನ್ನು ಸ್ಥಳೀಯ ಮದ್ಯ ತಯಾರಿಕೆಗೆ ಬಳಸುತ್ತಾರೆ. ಮತ್ತು ಇದರ ಇತರೆ ಭಾಗಗಳನ್ನು ಚಾಕಲೇಟ್, ಔಷಧಿ, ಸಾಬೂನು ಅಲ್ಲದೆ ಗೊಬ್ಬರ ತಯಾರಿಕೆಗೆ ಬಳಸುತ್ತಾರೆ . ನಿಸರ್ಗದಲ್ಲಿ ಉಚಿತವಾಗಿ ಲಭ್ಯಯಿರುವ ಈ ಮರದ ಉತ್ಪನ್ನಗಳ ಮೇಲೆ ಸರಕಾರ ನಿರ್ಬಂಧಗಳನ್ನು ಹೇರಿ ಗಿರಿಜನರ ಬದುಕುವ ಹಕ್ಕನ್ನೇ ಕಸಿಯುತ್ತಿದೆ. ಮಧ್ಯವರ್ತಿಗಳ ಹಾವಳಿಯಿಂದಾಗಿ ಸರಿಯಾದ ಬೆಲೆ ಸಿಗುತ್ತಿಲ್ಲ.

* ಮೊಹ, ಮಹಲ, ಇಲುಪ, ಹಿಪ್ಪೆ, ಇಪ್ಪೆ, ಪೂನಮ, ಮಹೂವಾದ ಇತರೆ ಹೆಸರು.
* ಗೊಂಡ, ಕೊಯ, ಸೋಲಿಗ, ಸಿದ್ದಿ ಮತ್ತು ಸಂತಾಲ ವಿವಿಧ ಬುಡಕಟ್ಟುಗಳು.

Friday, August 12, 2011

ಪಾದದ ಮೇಲೆ ಹುಟ್ಟು ಮಚ್ಚೆಯಾಗಿ ತಂಗ್ಯಮ್ಮಾ...: ಗದ್ದರ್



ರಕ್ಷಾ ಬಂಧನ, ಬಹುಶ: ರಕ್ತ ಸಂಬಂಧಯಿಲ್ಲದೆಯೂ ಒಂದು ಕಮ್ಮನೆಯ ಅಕ್ಕ-ತಂಗಿ, ಅಣ್ಣ-ತಮ್ಮ೦ದಿರ ಪ್ರೀತಿಯನ್ನು
ಎಂಥವರಿಗೂ ಮೊಗೆದು ಕೊಡಬಹುದಾದ ಹಬ್ಬ. ಮತ್ತು ರಾಖಿ ಹಬ್ಬದ ಕುರಿತು ಈಗಾಗಲೇ ಬೇರೆ ಬೇರೆ ಭಾಷಾ ಸಾಹಿತ್ಯದಲ್ಲಿ ಸಾಕಷ್ಟು ಬರೆಯಲಾಗಿದೆ. ಸಿನಿಮಾಗಳಲ್ಲಂತೂ ಎಕರೆಗಟ್ಟಲೆ ತೋರಿಸಲಾಗಿ ರಾಖಿ ಕಟ್ಟಿಸಿಕೊಂಡರೆ ಕಡ್ಡಾಯವಾಗಿ ಏನಾದರು ಗಿಫ್ಟ್ ಕೊಡಲೇಬೇಕೆಂಬ ಗೊತ್ತುವಳಿ ಒಂದು ಜಾರಿಯಾದಂತಿದೆ.

ಆದರೆ ದಶಕ ಹಿಂದೆ ತೆಲುಗುವಿನಲ್ಲಿ ಆರ್ ನಾರಾಯಣ ಮೂರ್ತಿ ನಿರ್ಮಿಸಿದ'ಓರಾಯ್ ರಿಕ್ಷಾ' ಸಿನಿಮಾಕ್ಕೆ ಗದ್ದರ್ ಬರೆದ 'ಮಲ್ಲೆ ತೀಗಕು ಪಂದಿರಿ ವೋಲೆ' ಹಾಡು ಎಂಥ ಅಧ್ಬುತವಾಗಿ ಮೂಡಿ ಬಂದಿದೆ ಎಂದರೆ ಇವತ್ತಿಗೂ ರಕ್ಷಾ ಬಂಧನ ದಿವಸ ಆ ಹಾಡನ್ನು ಪ್ರಾರ್ಥನೆ ಗೀತೆ ಎಂಬಂತೆ ಜನ ಮತ್ತೆ ಮತ್ತೆ ಕೇಳುತ್ತಾರೆ. ಒಬ್ಬ ಬಡ ರಿಕ್ಷಾ ತುಳಿಯುವ ಅಣ್ಣನ ನಿವೇದನೆ ಈ ಹಾಡು. ಜಾನಪದ ಸೊಗಡನ್ನು ಜನರ ಭಾಷೆಯಲ್ಲೇ ಹೆಣೆದು ಅವರನ್ನು ಎಚ್ಚರಗೊಳಿಸುವ ಅದೆಷ್ಟೋ ಗೀತೆ ರಚಿಸಿರುವ ಗದ್ದರ್ ಈ ಗೀತೆ ರಚನೆಗೆ ಆಂಧ್ರ ಪ್ರದೇಶದ ನಂದಿ ಅವಾರ್ಡ್ ಬಂದರು ಸ್ವೀಕರಿಸಲಿಲ್ಲ. ವಂದೇ ಮಾತರಂ ಶ್ರೀನಿವಾಸ್ ಹಾಡಿರುವ ಈ ಗೀತೆಯ ವಿಡಿಯೋ ಮತ್ತು ಅದರ ಭಾಷಾಂತರ ಇಲ್ಲಿದೆ.









ಪಾದದ ಮೇಲೆ ಹುಟ್ಟು ಮಚ್ಚೆಯಾಗಿ ತಂಗ್ಯಮ್ಮಾ...

__________________________________________________


ಮಲ್ಲಿಗೆ ಬಳ್ಳಿಗೆ ಹಂದರ ವೋಲೆ
ಮಬ್ಬುಗತ್ತಲಲ್ಲಿ ಬೆಳದಿಂಗಳ ವೋಲೆ
ನಿನ್ನ ಪಾದದ ಮೇಲೆ ಹುಟ್ಟು ಮಚ್ಚೆಯಾಗಿ ತಂಗ್ಯಮ್ಮ
ಒಡ ಹುಟ್ಟಿದ ಋಣ ತೀರಿಸುವೆನೆ ತಂಗ್ಯಮ್ಮ

ಮೈನೆರೆದ ಮರು ಘಳಿಗೆಯಿಂದಲೆ
ಹೆಣ್ಣುಮಗು ಮೇಲೆ ಏಸೊಂದು ಎಣಿಕೆ
ಕಾಣುವುದೆಲ್ಲ ನೋಡದಿರೆ೦ದರು
ನಗುವ ಮಾತಿಗೂ ನಗಬೇಡೆ೦ದರು

ಅಂಥ ಅಣ್ಣ ನಾನಾಗಲಾರೆ ತಂಗ್ಯಮ್ಮ
ನಿನ್ನ ಬಾಲ್ಯಕಾಲದ ಗೆಳೆಯನಮ್ಮ ತಂಗ್ಯಮ್ಮ
ಕಾಡಿನೊಳಗೆ ನವಿಲು ವೋಲೆ ತಂಗ್ಯಮ್ಮ
ಆಟ ಆಡಿಕೋ ಹಾಡು ಹಾಡಿಕೋ ತಂಗ್ಯಮ್ಮ IIಮಲ್ಲಿಗೆ ಬಳ್ಳಿಗೆ ಹಂದರ ವೋಲೆ II

ಬಳಲಿ ಹೋಗಿ ನೀ ಕಳೆಗುಂದಿದ್ದರೆ
ಬೆನ್ನುಮೂಳೆ ಆಗಿ ಒಳ ಬಂದೆನಮ್ಮ
ಒಂದುಕ್ಷಣ ನೀ ಕಾಣದಿದ್ದರೆ
ನನ್ನ ಕಣ್ಣಾಲಿಗಳು ಕಮರಿ ಹೋದವು

ಒಂದು ಕ್ಷಣ ನೀ ಮಾತುಬಿಟ್ಟರೆ ತಂಗ್ಯಮ್ಮ
ನಾ ದಿಕ್ಕಿಲ್ಲದ ಹಕ್ಕಿಯಾದೇನೆ ತಂಗ್ಯಮ್ಮ
ತುತ್ತು ತಿನ್ನದೇ ಮುನಿಸಿಕೊಂಡರೆ ತಂಗ್ಯಮ್ಮ
ನನ್ನ ಭುಜಬಲವೇ ಬಿದ್ದು ಹೋದಿತೆ ತಂಗ್ಯಮ್ಮ IIಮಲ್ಲಿಗೆ ಬಳ್ಳಿಗೆ ಹಂದರ ವೋಲೆ II

ಓದಿದಷ್ಟು ನಿನ್ನ ಓದಿಸ್ತೀನಮ್ಮ
ಬೆಳೆಯುವಷ್ಟು ನಿನ್ನ ಬೆಳೆಸ್ತೀನಮ್ಮ
ಜೋಡೊಂದು ಕೂಡೋ ಹೊತ್ತಿಗೆ
ಹೂವೋ ಎಲೆಯೋ ಜೋಡಿಸ್ತಿನಮ್ಮ

ಮೆಚ್ಚಿದವಗೆ ಕೊಡುವೆ ನಿನ್ನ ತಂಗ್ಯಮ್ಮ
ನನ್ನ ಕಣ್ಣೀರಿಂದ ಕಾಲು ತೊಳೆಯುವೆ ತಂಗ್ಯಮ್ಮ
ರಿಕ್ಷಾ ಗಾಡಿಯ ತೇರು ಮಾಡುವೆ ತಂಗ್ಯಮ್ಮ
ನಿನ್ನ ಅತ್ತೆಮನೆಗೆ ಹೊತ್ತೊಯ್ಯುವೆ ತಂಗ್ಯಮ್ಮ IIಮಲ್ಲಿಗೆ ಬಳ್ಳಿಗೆ ಹಂದರ ವೋಲೆ II

_____________________________________________________


ಕನ್ನಡಕ್ಕೆ : ರಮೇಶ ಅರೋಲಿ

Tuesday, July 12, 2011

ನವಿಲು ಸಾಕಿದೆನವ್ವ...





ನವಿಲು ಸಾಕಿದೆನವ್ವ
ನಾನೊಂದ ನವಿಲು ಸಾಕಿದೆನವ್ವ
ನವಿಲು ಸಾಕಿದೆನವ್ವ
ಬಣ್ಣದ ನವಿಲು ಸಾಕಿದೆನವ್ವ

ಬೆರಳಾಗ ಗರಿಗೆದರಿತ್ತು
ನೆರಳಾಗ ಕಣ್ಣು ಹೊರಳಿತ್ತು
ಸುಣ್ಣದ ಗ್ವಾಡಿ ಮ್ಯಾಲ
ಚಣ್ಣ೦ತ ನೆಗೆದಾಡಿತ್ತು II ನವಿಲು ಸಾಕಿದೆನವ್ವ II

ನಟ್ಟನಡು ಹಗಲಿನಾಗ
ಗುಟ್ಟಾಗಿ ಕೂಡುವ ನವಿಲು
ತಿಂಗಳದ ಬೆಳಕಿನ್ಯಾಗ
ಅಂಗಳಕ ಬರುವ ನವಿಲು II ನವಿಲು ಸಾಕಿದೆನವ್ವ II

ಪಾತರದ ಪಂಚೆ ಉಟ್ಟು
ಯಾತರದೊ ಹಾಡ ಕಟ್ಟಿ
ಬೆಳಕಿನ ದಿಬ್ಬದ ಮ್ಯಾಲ
ಕತ್ತಲು ಕುಣಿದ್ಹ೦ಗಿರುವ II ನವಿಲು ಸಾಕಿದೆನವ್ವ II

ಪಾಟಿಚೀಲದ ಒಳಗಾ
ಕ್ವಾಟೆಯ ಮಾಡಿಕೊಂಡು
ಮೂರು ತಿಂಗಳದೊಳಗ
ಆರಾರು ಮಕ್ಕಳ ಹಡೆವ II ನವಿಲು ಸಾಕಿದೆನವ್ವ II

ಮೂರು ಲೋಕದ ಕಣ್ಣು
ಸೆಳೆದಂತ ಮೂಗುತಿ ಹೆಣ್ಣು
ಒಡೆದ ಬಲೆ ಚೂರಿನಲ್ಲು
ಕಟೆದ್ಹ೦ಗ ಕಾಮನಬಿಲ್ಲು II ನವಿಲು ಸಾಕಿದೆನವ್ವ II

ಒಂಟಿ ಕಾಲಿಲೆ ಕುಣಿದು
ಮೋಡದ ಗಂಟೆ ಬಾರಿಸಿದಂತ
ಎಂಟೂರು ರೈತರ ಕರೆದು
ಭೂಮಿ ಕುಂಟೆ ಹೊಡಿಸಿದಂತ II ನವಿಲು ಸಾಕಿದೆನವ್ವ II

Sunday, June 5, 2011


ತೆಲುಗು ಕಾವ್ಯ ಜಾತ್ರೆಯಲ್ಲಿ ಗೇಯರೂಪ ಕವಿತೆಯ ತೇರು ಎಳೆದು ಬಹುದೂರ ಹಾದಿ ಸವೆಸಿದ ರಚನಾಕಾರರಿದ್ದರೆ. ಆ ಹಾದಿ ತುಳಿದ ಅನೇಕ ಆಧುನಿಕ ಕವಿಗಳು ಇಲ್ಲಿದ್ದಾರೆ. ಇಂತಹ ಗೇಯ ಕವಿತೆಗೆ ಮರುಜನ್ಮ ಕೊಟ್ಟಿದ್ದು ಗದ್ದರ್. ಆದರೆ ಆ ಕೂಸನ್ನು ಎತ್ತಿ, ಆಡಿಸಿ-ಮುದ್ದಾಡುತ್ತಿರುವುದು ಗೋರಟಿ ವೆಂಕನ್ನ. ಮೂರು ದಶಕಗಳ ಕಾಲ ಕಾವ್ಯ ಕೃಷಿಯಲ್ಲಿ ತೊಡಗಿರುವ ವೆಂಕನ್ನನ ದನಿಗೆ ಹಳ್ಳಿಗಾಡಿನಲ್ಲಿ ಅಲ್ಲೆಲ್ಲೋ ಅಲೆಯುತ್ತಿರುವ ದಾಸಯ್ಯನ ಏಕನಾದದ ಗತ್ತಿದೆ. ಜಾಗತೀಕರಣದ ಕುಲುಮೆಯಲ್ಲಿ ನಲುಗುತ್ತಿರುವ ಗ್ರಾಮ ವೃತ್ತಿಗಳು, ಅಲ್ಲಿನ ಕರುಣಾಜನಕ ಬದುಕಿನ ಸ್ಥಿತಿಯೇ ಇವರ ಕಾವ್ಯದ ವಸ್ತು. ಪ್ರಕಟವಾದ ಸಂಕಲನಗಳು: 'ಏಕನಾದಂ', 'ರೇಲ ಪೂತಲು' ಮತ್ತು 'ಅಲ ಸೆಂದ್ರವಂಕ'. ೨೦೧೦ ರಲ್ಲಿ ಪ್ರಕಟವಾದ 'ಅಲ ಸೆಂದ್ರವಂಕ' ಸಂಕಲನದಿಂದ 'ವಾನೋಚ್ಚೆನಮ್ಮಾ' ಕವಿತೆಯ ಅನುವಾದ ಈ "ಮಳೆ ಬಂತಮ್ಮಾ.."

ಮಳೆ ಬಂತಮ್ಮಾ...

ಮಳೆ ಬಂತಮ್ಮಾ…

ಮಳೆ ಬಂತಮ್ಮಾ ನೆರೆ ಬಂತಮ್ಮಾ
ಮಳೆಯ ಜತೆಯಾಗಿ ತೊರೆ ಬಂತಮ್ಮಾ
ಮರದ ಹೆರಳ ಮೇಲೆ ಬೆರಳು ಬೆರಳಾಗಿ ಉದುರಿ
ದಡದ ಬಂಡೆ ಮೇಲೆ ಗಂಧದಿ ಹರಿದಿದೆ
ಕೊಟ್ಟಿಗೆಗಿಳಿದು ಕೊಳೆಯೆಲ್ಲ ತೊಳೆದು
ಕೋಳಿಹುಂಜ ತುರುಬು ನವಿರಾಗಿ ಸವರಿ
ಎಮ್ಮೆಕೋಣಗಳಿಗೆ ಗಮ್ಮತ್ತು ತಂದಿದೆ
ದನದ ಹಿಂಡನು ಕರೆದು ಕೆರೆಯಲ್ಲಿ ಅದ್ದೀದೆ IIಮಳೆ ಬಂತಮ್ಮಾ II

ಹದ್ದುಗೂಡಿನಲ್ಲಿ ಹುಲ್ಲನು ತೋಯಿಸಿ
ಗುಬ್ಬಿಗೂಡಿನ ಕಲ್ಲು ಹರಳನು ಸರಿಸಿದೆ
ಟಿಟ್ಟಿಭ ಗಂಟಲು ಸಿಹಿಯನು ಹೆಚ್ಚಿಸಿ
ಪಿಕಳಾರ ಮೂಗಿನ ಪಾಚಿಯ ತೊಳೆದಿದೆ
ಎತ್ತಿನ ಡುಬ್ಬವ ಮುದ್ದಾಡಿ ನಲಿದು
ನೇಗಿಲ ಒಡಲನು ತಣ್ಣಗೆ ಮಾಡಿದೆ IIಮಳೆ ಬಂತಮ್ಮಾ II

ಹೊಸ ನೀರಾಗಿ ಬಂದು ಹೊಂಡಾವ ಸೇರಿ
ಹಸಿರು ಪಾಚಿಯ ತುಕ್ಕು ಹಸನಾಗಿ ತೊಳೆದಿದೆ
ಮೀನಿಗೆನೋ ನೀರ ಹುಳಿಯನು ಕುಡಿಸಿದೆ
ಕೊಕ್ಕರೆಗೆ ಔತಣದ ಕೋರಿಕೆ ತಂದಿದೆ
ಕಪ್ಪೆಗಳ ಹಬ್ಬವ ಕಣ್ಣಾರೆ ಕಂಡು
ಆಮೆ ಮದುವೆಗೆ ತಲೆನೀರು ಸುರಿದಿದೆ IIಮಳೆ ಬಂತಮ್ಮಾ II

ಕರಿ ನೆಲದ ಬಿರುಕೆಲ್ಲ ಕೈಯ್ಯಾರೆ ಸವರಿ
ಎರೆಭೂಮಿ ನೆಲವನು ಗದ್ದೆಯ ಮಾಡಿದೆ
ಮಣ್ಣುಗಡ್ಡೆಯ ನಡುವೆ ಖವ್ವಾತು ಮಾಡಿ
ಸವಳು ಭೂಮಿಯ ತಾಕಿ ಓಟವ ಕಿತ್ತಿದೆ
ಉಕ್ಕುವ ಹೆಂಡದಿ ತಣ್ಣೀರು ಸುರಿದು
ಈಚಲುಗಿಡ ಗಡಿಗೆ ಮೂತಿಯ ತೊಳೆದಿದೆ IIಮಳೆ ಬಂತಮ್ಮಾ II

ತಾ ಬರುವ ಮುಂಚೇನೆ ತೂಮುಗಳ ಎಬ್ಬಿಸಿ
ತನ್ನ ಹಾಡಿಗೆ ತಾನೇ ತಾಳ ಹಾಕಿದೆ ನೋಡು
ಬಿಳಿ ಮಲ್ಲಿಗೆ ಬಣ್ಣ ಮತ್ತಷ್ಟು ಬಿಳುಪಾಗಿಸಿ
ಕೆಂಪು ಮಲ್ಲಿಗೆ ತೊಳೆದು ಕಂಪನು ಸೂಸಿದೆ
ತುಲಶಮ್ಮ ದೀಪದ ಚಿಪ್ಪುವಿನಲಿ ಸೇರಿ
ಹೂ ಬಿಸಿಲ ಹರಳಲ್ಲಿ ನಿಗ ನಿಗಾ ಎಂದಿದೆ IIಮಳೆ ಬಂತಮ್ಮಾ II

ವೆಮುಲಾಡ ರಾಜನ್ನ ಪ್ರಾರ್ಥನೆ ನೋಡಿ
ಪಕ್ಕದ ಮನೆಗಳ ಜಳ ಜಳ ತೊಳೆದಿದೆ
ಅರಳಿ ಎಲೆ ತೋಯಿಸಿ ಉರುಳಿ ಉರುಳಿ ಬಿದ್ದು
ಸಾಧುಗಳ ಸಮಾಧಿ ಸನ್ನಿಧಿಗೆ ಸೇರಿದೆ
ಸೂಫಿ ದರ್ಗಾ ಸುತ್ತಿ ಸಲಾಮು ಮಾಡಿದೆ
ನೆಗೆವ ನಂದಿಕೋಲಿಗೆ ಬೆಳ್ಳಿ ಮೆರುಗದ್ದಿದೆ IIಮಳೆ ಬಂತಮ್ಮಾ II

ಹರಿದಾಡಿ ಹರಿದಾಡಿ ಗೋದಾವರಿಯನು ಸೇರಿ
ಸೀತಮ್ಮ ಪಾದಗಳ ಶಿರಭಾಗಿ ತಾಕಿದೆ
ಅಂಕು ಡೊಂಕಾಗಿ ವನವೆಲ್ಲ ತಿರುಗಿ
ಕೃಷ್ಣಮ್ಮ ಒಡಲಲಿ ಇಷ್ಟಾದಿ ಉಡುಗಿದೆ
ದುಂದುಭಿ ತಲೆ ತಾಕಿ ದೂಳೆಲ್ಲ ತೊಳೆದು
ಅಂದಾದ ಉಸುಕನು ಕನ್ನಡಿಯ ಮಾಡಿದೆ
ಇಷ್ಟ ಇದೆಯೋ ಇಲ್ಲೋ ಪ್ಯಾಟೆಗೆ ಬಂದಿದೆ
ಮೂಗು ಮುಚ್ಚಿಕೊಂಡು ಮೂಸಿಯಲಿ ಮುಳುಗಿದೆ IIಮಳೆ ಬಂತಮ್ಮಾ II


_________________________________________________________________
ತೂಮು= ಮಳೆಹುಳ, ಮೂಸಿನದಿ= ಹೈದರಾಬಾದ್ ನಗರದಲ್ಲಿ ಹರಿಯುವ (ಈಗ ಚರಂಡಿಯಾಗಿ ಉಳಿದ) ನದಿ ಹೆಸರು. ವೆಮುಲಾಡ ರಾಜನ್ನ= ಕರೀಂ ನಗರ ಜಿಲ್ಲೆಯ ವೆಮುಲವಾಡದಲ್ಲಿರುವ ದೇವಸ್ಥಾನ ಮತ್ತು ಅಲ್ಲಿರುವ ರಾಜ ರಾಜೇಶ್ವರ ಸ್ವಾಮಿ.


ಕನ್ನಡಕ್ಕೆ : ರಮೇಶ ಅರೋಲಿ.

Saturday, April 9, 2011

ಅಳಿಲುಂಡ ಗೂಡಾಗ ಮಳೆ ನಿಂತು ನೋಡೈತೆ


ಸುವ್ವಿ ಸುವ್ವಿ ಲಾಲಿ ಸುವ್ವಿ ಸುವ್ವಕ್ಕ
ಸುಮ್ಮಾನೆ ಕುಂತ್ಯಾಕ ಮಳೆ ಸುರಿಯೋ ಕಾಲಕ್ಕ
ನೀ ಸುಮ್ಮನೆ ಕುಂತ್ಯಾಕ ಮಳೆ ಸುರಿಯೋ ಕಾಲಕ್ಕ

ಬೂದಿಯಾಗುವ ಗುಟ್ಟು ಗಾಳಿ ಮಾತಿಗೆ ಬಿಟ್ಟು
ರಾತ್ರಿ ಅಂಗಳಕ ಹಗಲಿನ ಸಸಿನೆಟ್ಟು
ಕಾಯುತ್ತಾ ಕಾಯುತ್ತ ಕಾಯಾದೇನೋ ನಾ ಹಣ್ಣಾದೇನೋ

ಯಾರ ಅಂಜಿಕಿ ಊರ ಸಣ್ಣ ಹಳ್ಳಕ್ಕ
ಎಲ್ಲೆಲ್ಲೋ ಹರಿಯಿತು ಯಾರದೋ ಪುಣ್ಯಕ್ಕ
ಪುಣ್ಯ ಎಲ್ಲೆಲ್ಲೋ ಹರಿಯಿತು ಯಾರದೋ ಪಾಪಕ್ಕ

ನೆಂಟ ನೆಂಟರ ಗಂಟು ಕಾಲು ಹಾದ್ಯಾಗ
ನಡು ಇರುಳ ಮೆರವಣಿಗಿ ಕಾಗಿ ಬಿದ್ಯಾಗ
ನಡಿಯುತ್ತಾ ನಡಿಯುತ್ತಾ ಕೆರೆಯಾದೇನೋ ನಾ ನದಿಯಾದೇನೋ

ನೆಲವೆಲ್ಲ ನಕ್ಕೀತು ಮಕ್ಕಾಳಾಡೋದಕ್ಕ
ಆಕಾಶ ಅತ್ತೀತು ಅವರಿಲ್ಲದ ಲೋಕಕ್ಕ
ಲೋಕ ಮೂಕವಾಯಿತು ನೋಡ ಮೋಡಯಿಲ್ಲದ ವೇಳಕ್ಕ

ಹೂ ಉದುರಿ ಹೋದವು ಹೂ-ಬಿಸಿಲ ಕಾಡಲ್ಲಿ
ಮಳೆ ನಿಂತು ಹೋಯಿತು ಅಳಿಲುಂಡ ಗೂಡಲ್ಲಿ
ನೋಡುತ್ತಾ ನೋಡುತ್ತಾ ಗಿದ್ವಾದೇನೋ ನಾ ದಡವಾದೇನೋ

ಗಜಲ್


ಎಷ್ಟು ಕಾಲ ಎಂಥ ಮಾತು ವ್ಯರ್ಥ ಮಾಡಿತು ಸಣ್ಣ ಮುನಿಸಿಗೆ ಜಗವೆಂಥ ಸೋಜಿಗ
ಕಟ್ಟಲಾಗದೆ ಕೈಗೋಡೆ ಕಣ್ಣ ಝಾರಿಗೆ ನಿದ್ರೆ ಮರೆಯಿತು ಜಗವೆಂಥ ಸೋಜಿಗ

ಎಷ್ಟು ರೂಮಿಗಳು ಎಂಥ ಗಜಲುಗಳು ದುಃಖ ನಿಲ್ಲಿಸದಿರಲು
ತಾಯಿತ ಕಟ್ಟಿತು ಮೊಲೆಗೂಸಿನ ಅಳುಕೇಕೆಗೆ ಜಗವೆಂಥ ಸೋಜಿಗ

ಎಷ್ಟು ಬಾದಾಶಗಳು ಎಂಥ ಬಹುದ್ದೂರರು ಗೆದ್ದರು ಸೋತರು
ಕೊನೆಗೆ ಕಟ್ಟಿಸಿಕೊಂಡರು ಗೋರಿ ದಿನಗೂಲಿ ರೊಟ್ಟಿಯ ನೀಡಿ ಜಗವೆಂಥ ಸೋಜಿಗ

ಎಷ್ಟು ಸಾವು ಎಂಥ ಶೋಕ ಋಣದ ಕೊನೆಯ ಮನೆಗೆ
ಮಣ್ಣುಕೊಟ್ಟು ಬೆನ್ನು ಮಾಡಿತು ಮಗುವಾಗುವಾಸೆಗೆ ಜಗವೆಂಥ ಸೋಜಿಗ

ಎಷ್ಟು ಸುಂದರಿಯರು ಎಂಥ ಪ್ರತಿಮೆಗಳು ಲೋಕದಂಗಡಿಯಲ್ಲಿ
ಪಾಪ ಪರಿ ಪರಿಯ ಬೇಡಿದವು ಕ್ಷಣ ಉಸಿರಿಗೆ ಅರೋಲಿಯ ಜಗವೆಂಥ ಸೋಜಿಗ